ಫೈಸ್ಟಸ್
	ದಕ್ಷಿಣ ಕ್ರೀಟಿನ ಪುರಾತನ ಸಾಂಸ್ಕøತಿಕ ಕೇಂದ್ರ. ನಾಸಸ್‍ಗೆ ನೈಋತ್ಯದಲ್ಲಿ ಮೆಸರಾ ಕೊಲ್ಲಿಯ ದಡದ ಬಳಿ ಇದೆ. ಮಿನೋವನ್ ಸಂಸ್ಕøತಿಗೆ ಸಂಬಂಧಿಸಿದ ಅನೇಕ ಅವಶೇಷಗಳನ್ನು ಇಲ್ಲಿ ಸಂಶೋಧಿಸಲಾಗಿದೆ. ಫೈಸ್ಟಸ್‍ನಲ್ಲಿ ಸಂಸ್ಕøತಿ ಎಷ್ಟು ಸಮೃದ್ಧವಾಗಿ ಬೆಳೆದಿತ್ತೆಂಬುದು ಇವುಗಳ ಸಮೀಕ್ಷೆಯಿಂದ ಗೊತ್ತಾಗುತ್ತದೆ. ನವಶಿಲಾಯುಗದಲ್ಲಾಗಲೇ ಇಲ್ಲಿ ಜನವಸತಿಯಿತ್ತು. ಪೂರ್ವ ಮಿನೋವನ್ ಯುಗದ ಮಡಕೆ ಕುಡಿಕೆಗಳು ಇಲ್ಲಿ ದೊರೆತಿವೆ. (ಕ್ರಿ.ಪೂ. 2500-2000) ಬೂದುಬಣ್ಣದ ಈ ಮಣ್ಣಿನ ಪಾತ್ರೆಗಳ ಮೇಲೆ ಬಣ್ಣಗಳಿಂದ ಅಲಂಕರಿಸಿದ ಸರಳ ವಿನ್ಯಾಸಗಳಿವೆ. ಮಧ್ಯ ಮಿನೋವನ್ ಯುಗದ (ಕ್ರಿ.ಪೂ. 2000-1550) ಅರಮನೆಯೊಂದು ಪತ್ತೆಯಾಗಿದೆ. ಇದನ್ನು ಫೈಸ್ಟಸಿನ ಬೆಟ್ಟದ ಮೇಲೆ ನಿರ್ಮಿಸಲಾಗಿತ್ತು. ಈ ಕಟ್ಟಡದ ಬಳಿ ಕಾಲಕ್ರಮದಲ್ಲಿ ಇತರ ವಾಸ್ತುಕೃತಿಗಳನ್ನೂ ರಚಿಸಲಾಗಿತ್ತು. ಅಲ್ಲದೆ ಕ್ರಮೇಣ ಅನೇಕ ಮಾರ್ಪಾಡುಗಳನ್ನು ಮಾಡಲಾಗಿತ್ತು. ಮಧ್ಯ ಮಿನೋವನ್ ಕಾಲದ ಮಡಕೆ ಕುಡಿಕೆಗಳೂ ಸಾಕಷ್ಟು ಸಿಕ್ಕಿವೆ. ಇವನ್ನು ಸೂಕ್ಷ್ಮವಾಗಿ ರಚಿಸಲಾಗಿದೆ. ಇವುಗಳ ಕೆಲವು ಆಕರ್ಷಕ ಮಾದರಿಗಳನ್ನು ಮುಖ್ಯವಾಗಿ ಗಮನಿಸಬಹುದು. ಇವುಗಳ ಪೈಕಿ ಹಣ್ಣಿಡುವ ಬಡು ಅತ್ಯಂತ ಸುಂದರವಾದ್ದು. ಹಣ್ಣಿಡುವ ಪಾತ್ರೆಯ ಭಾಗದಲ್ಲಿ ಪುಷ್ಪದಳಗಳ ಅಲಂಕರಣಿಯೂ ಬಡುವಿನ ದಂಡಭಾಗದಲ್ಲಿ ದಳಗಳ ಪಟ್ಟಿ ಹಾಗೂ ವಜ್ರಾಕೃತಿಯ ಅಲಂಕರಣೆಯೂ ಗಮನಿಸುವಂಥವು. ತತ್ತಿಯ ಚಿಪ್ಪಿನಷ್ಟು ತೆಳುವಾದ ಹಾಗೂ ನಯವಾದ ಮಡಕೆ ಕುಡಿಕೆಗಳೂ ಸಿಕ್ಕಿವೆ. ಇವುಗಳನ್ನೆಲ್ಲ ಚಕ್ರ (ತಿಗುರಿ) ಇಲ್ಲವೆ ಚರಕದಲ್ಲಿ ತಿರುಗಿಸಿ ತಯಾರಿಸಲಾಗಿದೆ. ತಂತ್ರ ಕೌಶಲ್ಯದ ದೃಷ್ಟಿಯಿಂದ ಇವು ಕುತೂಹಲಕರವಾಗಿವೆ.

	ಮಧ್ಯ ಮಿನೋವನ್ ಕಾಲದ ಇತರ ಅವಶೇಷಗಳ ಪೈಕಿ ಮಣ್ಣಿನ ಬಟ್ಟಲೊಂದು ಗಮನಾರ್ಹವಾದ್ದು. ಇದರ ಕಂಠದ ಅಂಚಿನಿಂದ ಮಧ್ಯದ ಕೇಂದ್ರ ಬಿಂದುವಿನವರೆಗೆ ಸುರುಳಿಯಾಕಾರದಲ್ಲಿ ಶಾಸನವನ್ನು ಬರೆಯಲಾಗಿದೆ. ಈ ಶಾಸನದಲ್ಲಿ ಬಳಸಲಾಗಿರುವ ಲಿಪಿ ಮಿನೋವನ್ ಲಿಪಿಗಿಂತ ಬೇರೆ ರೀತಿಯದು. ಈ ಶಾಸನದ ಹಲವು ಲಿಪಿ ಲಕ್ಷಣಗಳು ಆನಟೋಲಿಯನ್ ಮೂಲದಿಂದ ಬಂದವೆಂದು ತೋರುತ್ತದೆ.

	ಕ್ರಿ.ಪೂ. 1550-1400ರಲ್ಲಿ ಫೈಸ್ಟಸ್ ಉಚ್ಛ್ರಾಯ ಸ್ಥಿತಿಗೆ ಏರಿತ್ತು. ಅದರ ಸಾಂಸ್ಕøತಿಕ ಹಿರಿಮೆ ಸುತ್ತಮುತ್ತ ಪ್ರಖ್ಯಾತವಾಗಿತ್ತು. ಆದರೆ ಉಳಿದ ಕ್ರೀಟನ್ ನಗರಗಳಂತೆ ಈ ನಗರವೂ ಅಗ್ನಿಗೆ ಆಹುತಿಯಾಯಿತು.
(ಎಚ್.ಆರ್.ಆರ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ